ಗ್ಯಾಸ್ಟೀರಿಯ -
ಲಿಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ ಜಾತಿ; ದಕ್ಷಿಣ ಆಫ್ರಿಕದ ಮೂಲವಾಸಿ.  ಇದರಲ್ಲಿ ಸುಮಾರು 50 ಪ್ರಭೇದಗಳಿವೆ.  ಹೂವಿನ ಬುಡ ಭಾಗ ಉಬ್ಬಿಕೊಂಡಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.  ಗ್ರೀಕಿನಲ್ಲಿ ಗ್ಯಾಸ್ಟರ್ ಎಂದರೆ ಹೊಟ್ಟೆ ಎಂದು ಅರ್ಥ. ಈ ಗಿಡಗಳನ್ನು ಕುಂಡಸಸ್ಯ ಮತ್ತು ಕಲ್ಲೇರಿಸಸ್ಯಗಳಾಗಿ ಬೆಳೆಸುತ್ತಾರೆ.  ಗ್ಯಾಸ್ಟೀರಿಯ ಕಾಂಡವಿಲ್ಲದ ರಸಭರಿತ ಸಸ್ಯ; ತನ್ನ ಹತ್ತಿರಸಂಬಂಧಿಯಾದ ಆಲವೀಯನ್ನು ಬಹುವಾಗಿ ಹೋಲುತ್ತದೆ.  ಅದರಲ್ಲಿರುವಂತೆಯೇ ಇದರಲ್ಲೂ ಎಲೆಗಳು ಗಿಡದ ಬುಡದಲ್ಲಿ ಗುಲಾಬಿ ದಳಗಳ ಮಾದರಿಯಲ್ಲಿ ಜೋಡಣೆಗೊಂಡಿವೆ.  ಕೆಲವು ಪ್ರಭೇದಗಳಲ್ಲಿ ಮಾತ್ರ ಪುಟ್ಟ ಕಾಂಡವೊಂದಿದ್ದು ಅದರ ಮೇಲೆ ಎರಡು ಸಾಲುಗಳಲ್ಲಿ ಎಲೆಗಳು ಜೋಡಣೆಗೊಂಡಿರುತ್ತವೆ.  ಎಲೆಗಳ ಮೇಲೆ ಬಿಳಿಯ ಇಲ್ಲವೆ ಊದಾಬಣ್ಣದ ಸಣ್ಣಸಣ್ಣ ಚುಕ್ಕೆಗಳಿದ್ದು ಗಿಡದ ಅಂದವನ್ನು ಹೆಚ್ಚಿಸಿವೆ.  ಹೂಗಳ ಬುಡಭಾಗ ಕೆಂಪು ಅಥವಾ ಗುಲಾಬಿ ಬಣ್ಣದ ಕೊಳವೆಯಂತೆ ಇದ್ದು. ಮೇಲ್ಭಾಗ ನಸು ಹಸಿರು ಬಣ್ಣದಿಂದ ಕೂಡಿದೆ.  ಇದರಿಂದ ಹೂಗಳು ಬಲು ಸುಂದರವಾಗಿ ಕಾಣುತ್ತವೆ.

	ಪ್ರಕಂದದ ತುಂಡುಗಳಿಂದ ಇಲ್ಲವೆ ಎಲೆಗಳಿಂದ ಗಿಡಗಳನ್ನು ವೃದ್ಧಿಸಬಹುದು. ಉದ್ಯಾನಗಾರಿಕೆಯಲ್ಲಿ ಅತಿ ಮುಖ್ಯವಾದ ಪ್ರಭೇದಗಳಿವು; ಗ್ಯಾ.ಅಸಿನಾಸಿಫೋಲಿಯ ಗ್ಯಾ.ಅಂಗ್ಯುಲೇಟ, ಗ್ಯಾ.ಆರ್ಮ್‍ಸ್ಟ್ರಾಂಗಿಯೈ, ಗ್ಯಾ.ಕ್ಯಾಡಿಕನ್ಸ್, ಗ್ಯಾ.ಕ್ಯಾರಿನೇಟ, ಗ್ಯಾ.ಮ್ಯಾಕ್ಯುಲೇಟ, ಗ್ಯಾ.ನೈಟಿಡ ಮತ್ತು ಗ್ಯಾ.ವೆರುಕೋಸ.
(ಬಿ.ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ